ಅದು ಶುಕ್ರವಾರ.. ಅಕ್ಟೋಬರ್ 29.. ಸ್ಯಾಂಡಲ್ವುಡ್ ಪಾಲಿಗೆ ಶುಕ್ರವಾರ ಶುಭವಾಗಿಯೇ ಆರಂಭವಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ‘ಭಜರಂಗಿ-2’ ಸಿನಿಮಾ ತೆರೆ ಕಂಡಿತ್ತು. ಬೆಳ್ಳಂಬೆಳಗ್ಗೆಯೇ ‘ಭಜರಂಗಿ-2’ ಪ್ರದರ್ಶನ ಆರಂಭವಾಗಿತ್ತು. ಕೆಲ ಥಿಯೇಟರ್ಗಳಿಗೆ ಶಿವಣ್ಣ ಭೇಟಿ ಕೂಡ ನೀಡಿದ್ದರು. ‘ಭಜರಂಗಿ-2’ ಆರ್ಭಟ ಜೋರಾಗಿರುವಾಗಲೇ ಪುನೀತ್ ರಾಜ್ಕುಮಾರ್ ನಿಧನವಾರ್ತೆ ಇಡೀ ಕರುನಾಡಿಗೆ ಬರಸಿಡಿಲಿನಂತೆ ಬಡಿಯಿತು.
ಪುನೀತ್ ರಾಜ್ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಮೊದಲು ಕೇಳಿಬಂತು. ಪುನೀತ್ ರಾಜ್ಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿರುವಾಗಲೇ ದುರಂತ ಸಂಭವಿಸಿಬಿಡ್ತು. ತೀವ್ರ ಹೃದಯಾಘಾತ ಮತ್ತು ಹೃದಯ ಸ್ತಂಭನದಿಂದ ಪುನೀತ್ ರಾಜ್ಕುಮಾರ್ ವಿಧಿವಶರಾಗಿಬಿಟ್ಟರು. ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ಮರಣದಿಂದ ಇಡೀ ಕರ್ನಾಟಕವೇ ಆಘಾತಗೊಂಡಿತ್ತು. ಅಭಿಮಾನಿಗಳು ದಿಗ್ಭ್ರಮೆಗೊಂಡರು.
ಬೆಳಗ್ಗೆ ಎಂದಿನಂತೆ ವ್ಯಾಯಾಮ ಮಾಡಿದ್ದ ಪುನೀತ್ ರಾಜ್ಕುಮಾರ್
ಅಸಲಿಗೆ ಪುನೀತ್ ರಾಜ್ಕುಮಾರ್ಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಪ್ರತಿನಿತ್ಯ ವ್ಯಾಯಾಮ ಮಾಡುತ್ತಾ, ಆರೋಗ್ಯಕರ ಆಹಾರ ಸೇವನೆ ಮಾಡುತ್ತಾ ಅಪ್ಪು ಫುಲ್ ಫಿಟ್ ಅಂಡ್ ಫೈನ್ ಆಗಿದ್ದರು. ಗುರುವಾರ ರಾತ್ರಿ ಗುರುಕಿರಣ್ ಅವರ ಬರ್ತ್ಡೇ ಸೆಲೆಬ್ರೇಷನ್ನಲ್ಲಿ ಪಾಲ್ಗೊಂಡಿದ್ದ ಪುನೀತ್ ರಾಜ್ಕುಮಾರ್ ಶುಕ್ರವಾರ ಬೆಳಗ್ಗೆ ಕೂಡ ಎಂದಿನಂತೆ ವರ್ಕೌಟ್ ಮಾಡಿದ್ದರು.
ಮನಕಲಕುವ ಫೋಟೋ ವೈರಲ್
ಶುಕ್ರವಾರ ಬೆಳಗ್ಗೆ ವ್ಯಾಯಾಮ ಮಾಡುವಾಗಲೇ ಪುನೀತ್ ರಾಜ್ಕುಮಾರ್ಗೆ ಎದೆನೋವು ಕಾಣಿಸಿಕೊಂಡಿತ್ತಾ? ವಾಕಿಂಗ್ ಮಾಡುವಾಗಲೇ ಅವರಿಗೆ ಸುಸ್ತಾಗುತ್ತಿತ್ತಾ? ಗೊತ್ತಿಲ್ಲ. ಆದರೆ, ಪಾರ್ಕ್ನಲ್ಲಿ ವಾಕಿಂಗ್ ಮಾಡುವಾಗ ಎದೆಯ ಕೆಳಭಾಗದ ಮೇಲೆ ಕೈಯಿಟ್ಟುಕೊಂಡು, ಕೆಳಗೆ ನೋಡುತ್ತಾ, ನಡೆದುಕೊಂಡು ಬರುತ್ತಿರುವ ಪುನೀತ್ ರಾಜ್ಕುಮಾರ್ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘’ಇದೇ ಪುನೀತ್ ರಾಜ್ಕುಮಾರ್ ಅವರ ಕೊನೆಯ ನಡಿಗೆ’’ ಎನ್ನಲಾಗಿದೆ. ಪುನೀತ್ ರಾಜ್ಕುಮಾರ್ ಅವರ ಈ ಫೋಟೋ ನೋಡಿ ಅಭಿಮಾನಿಗಳು ಗದ್ಗದಿತರಾಗಿದ್ದಾರೆ. ಕ್ರೂರ ವಿಧಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಡಾ.ರಮಣ ರಾವ್ ಹೇಳಿದ್ದೇನು?
‘’ಶುಕ್ರವಾರ ಬೆಳಗ್ಗೆ 11:15 ರಿಂದ 11:20 ರ ಸುಮಾರಿಗೆ ಪುನೀತ್ ರಾಜ್ಕುಮಾರ್ ಮತ್ತು ಅಶ್ವಿನಿ ನಮ್ಮ ಕ್ಲಿನಿಕ್ಗೆ ಬಂದರು. ಆಗ ಅಪ್ಪು ಹೇಳಿದ್ದು, ‘’ನಾನು ಈಗ ತಾನೆ ಜಿಮ್ ಇಂದ ಬರ್ತಾಯಿದ್ದೇನೆ. ಇವತ್ತು ನಾನು ನನ್ನ ಪ್ರತಿನಿತ್ಯದ ಸೆಷನ್ ಮಾಡಿದ್ದೇನೆ. ಇವತ್ತು ಎಕ್ಸ್ಟ್ರಾ ಬಾಕ್ಸಿಂಗ್ ಕೂಡ ಮಾಡಿದ್ದೇನೆ. ಆಮೇಲೆ ಸ್ಟೀಮ್ ಸ್ವಲ್ಪ ಎಕ್ಸ್ಟ್ರಾ ತಗೊಂಡಿದ್ದೇನೆ. ನನಗೆ ಸ್ವಲ್ಪ ಸುಸ್ತಾಗುತ್ತಿದೆ’’ ಎಂದರು. ‘’ನೋವು ಏನಾದರೂ ಇದ್ಯಾ?’’ ಅಂತ ನಾನು ಕೇಳಿದೆ. ‘’ನೋವೇನೂ ಇಲ್ಲ ಅಂತ ಹೇಳಿದರು’’. ನಾನು ಅವರನ್ನ ಮಲಗಿಸಿ ಪರೀಕ್ಷೆ ಮಾಡಿದೆ. ಬಿಪಿ ನಾರ್ಮಲ್ ಇತ್ತು. ಹಾರ್ಟ್ ಸೌಂಡ್ಸ್ ನಾರ್ಮಲ್ ಇತ್ತು. ಆದರೆ, ಅವರು ಬೆವರುತ್ತಿದ್ದರು. ಆಗ ನಾನು ‘’ಬೆವರುತ್ತಿದ್ದೀರಲ್ಲಾ’’ ಎಂದು ಕೇಳಿದೆ. ಅದಕ್ಕೆ ಅವರು ‘’ಇಲ್ಲ, ಇದು ನನಗೆ ನಾರ್ಮಲ್. ಈಗಷ್ಟೇ ಜಿಮ್ ಇಂದ ಬಂದೆ’’ ಎಂದರು. ಆಗ, ‘’ಆದರೂ, ಒಂದು ಇಸಿಜಿ ಮಾಡೋಣ. ಇದನ್ನ ಹಾಗೇ ಬಿಡುವುದು ಬೇಡ’’ ಅಂತ ಒಂದು ನಿಮಿಷದೊಳಗೆ ಇಸಿಜಿ ಮಾಡಿದ್ವಿ. ಅದರಲ್ಲಿ ಹಾರ್ಟ್ ಸ್ಟ್ರೇನ್ ಆಗಿದ್ದು ಕಂಡು ಬಂತು’’
‘’ಇಸಿಜಿನಲ್ಲಿ ಹಾರ್ಟ್ ಬೀಟ್ ರೆಗ್ಯುಲರ್ ಇತ್ತು. ಆದರೆ, ಇಸಿಜಿ ಪ್ಯಾಟರ್ನ್ನಲ್ಲಿ ತುಂಬಾ ಸ್ಟ್ರೇನ್ ಇತ್ತು. ಆಗ ನಾನು ಅಪ್ಪುಗೆ ಹೇಳೋದು ಬೇಡ ಅಂತ ಅಶ್ವಿನಿಗೆ ಹೇಳಿದೆ. ತುಂಬಾ ಸ್ಟ್ರೇನ್ ಕಂಡು ಬರ್ತಾಯಿದೆ, ನಾವು ಆಸ್ಪತ್ರೆಗೆ ಹೋಗಬೇಕು ಅಂತ ಅಶ್ವಿನಿಗೆ ತಿಳಿಸಿದೆ. ಆಗ ಫೋನ್ ಮಾಡೋದಕ್ಕೆ ಅಂತ ಅಶ್ವಿನಿ ಹೊರಗೆ ಹೋದರು. ‘’ನನಗೆ ತಲೆಸುತ್ತು ಬರುತ್ತಿದೆ’’ ಅಂತ ಅಪ್ಪು ಹೇಳಿದರು. ಹೀಗಾಗಿ ‘’ನಡೆಯಬೇಡಿ.. ನಾವು ಹಾಗೆ ಕರೆದುಕೊಂಡು ಹೋಗ್ತೀವಿ’’ ಅಂತ ಹೇಳಿದ್ವಿ. ಆಗ ಅವರು ಉಸಿರಾಡುತ್ತಿದ್ದರು, ಮಾತನಾಡುತ್ತಿದ್ದರು.. ಕೂತುಕೊಳ್ಳುವುದು ಬೇಡ, ಅವರು ಮಲ್ಕೊಳ್ಳಿ ಅಂತ ಕಾರಿನಲ್ಲಿ ಮಲಗಲು ಹೇಳಿದೆ. ಇಲ್ಲಿಂದ ಐದು ನಿಮಿಷದೊಳಗೆ ಟ್ರಾಫಿಕ್ ಇದ್ದರೂ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋದರು’’
‘’ಇದನ್ನ ನಾವು ಸಡನ್ ಡೆತ್ ಅಂತ ಕರೆಯುತ್ತೇವೆ. ಈ ಸಡನ್ ಡೆತ್ ಯಾಕೆ ಬರುತ್ತೆ? ಯಾಕೆ ಆಗುತ್ತೆ ಎಂಬ ಕ್ಲಾರಿಟಿ ನಮಗಿಲ್ಲ. ಸಡನ್ ಡೆತ್ನಿಂದಾಗಿ ಹಾರ್ಟ್ನಿಂದ ಬ್ರೇನ್ಗೆ ಬ್ಲಡ್ ಸಪ್ಲೈ ಆಗಲ್ಲ. ಐಸಿಯುನಲ್ಲಿದ್ದರೂ ಈ ತರಹ ಆದರೆ ರಿವೈವ್ ಮಾಡುವುದು ತುಂಬಾ ಕಷ್ಟ. ಅಪ್ಪುಗೆ ಆಗಿದ್ದು ಇದೇ. ಹಾರ್ಟ್ ಅಟ್ಯಾಕ್ ಆದರೆ ತುಂಬಾ ನೋವು ಬರುತ್ತದೆ. ಡಯಾಬಿಟಿಕ್ ಆಗಿದ್ದರೆ ನೋವಿರುವುದಿಲ್ಲ. ಅಪ್ಪು ಡಯಾಬಿಟಿಕ್ ಅಲ್ಲ. ಅವರು ಯಾವುದೇ ಮೆಡಿಸಿನ್ಸ್ ತೆಗೆದುಕೊಳ್ಳುತ್ತಿರಲಿಲ್ಲ. ಉತ್ತಮ ಅಭ್ಯಾಸಗಳನ್ನ ಹೊಂದಿದ್ದರೂ, ಯಂಗ್ ಆಗಿದ್ದರೂ ಅವರು ಉಳಿಯಲಿಲ್ಲ. ಹಾರ್ಟ್ ಸ್ಟ್ರೇನ್ ಆಗಿದ್ದರೂ ಯಂಗ್ ಆಗಿದ್ದರೆ ಏನೂ ಆಗಲ್ಲ ಅಂತ ಧೈರ್ಯವಾಗಿ ನಾನು ಆಸ್ಪತ್ರೆಗೆ ಕಳುಹಿಸಿಕೊಟ್ಟೆ. ಆದರೆ, ಸಡನ್ ಡೆತ್ ಅಥವಾ ಕಾರ್ಡಿಯಾಕ್ ಅರೆಸ್ಟ್ನಿಂದ ಅವರು ತೀರಿಕೊಂಡರು’’ ಎಂದು ಡಾ.ರಮಣ ರಾವ್ ಹೇಳಿದ್ದರು.
ವಿಕ್ರಂ ಆಸ್ಪತ್ರೆಯ ವೈದ್ಯರು ಹೇಳಿದ್ದೇನು?
‘’ಶುಕ್ರವಾರ ಬೆಳಗ್ಗೆ ಪುನೀತ್ ರಾಜ್ಕುಮಾರ್ ಎರಡು ಗಂಟೆಗಳ ಕಾಲ ಜಿಮ್ ಮಾಡಿದ್ದಾರೆ. ಆಮೇಲೆ ಎದೆನೋವು ಬಂದಿದೆ. ಫ್ಯಾಮಿಲಿ ಡಾಕ್ಟರ್ ಹತ್ತಿರ ಹೋಗಿದ್ದರು. ಡಾ.ರಮಣ ರಾವ್ ಇಸಿಜಿ ಮಾಡಿದ್ದರು. ಇಸಿಜಿನಲ್ಲಿ ಹಾರ್ಟ್ ಅಟ್ಯಾಕ್ ತೋರಿಸಿತ್ತು. ತಕ್ಷಣ ಅವರು ವಿಕ್ರಂ ಆಸ್ಪತ್ರೆಗೆ ಹೊರಟಿದ್ದಾರೆ. ದಾರಿಯಲ್ಲೇ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಕಾರ್ಡಿಯಾಕ್ ಆಕ್ಟಿವಿಟಿ ಇರಲಿಲ್ಲ. ಸುಮಾರು ಮೂರು ಗಂಟೆಗಳ ಕಾಲ ನಾವು ಪುನೀತ್ ರಾಜ್ಕುಮಾರ್ ಅವರನ್ನು ವೆಂಟಿಲೇಟರ್ಗೆ ಹಾಕಿದ್ವಿ. ಕಾರ್ಡಿಯಾಕ್ ಮಸಾಜ್ ಮಾಡಿಬಿಟ್ಟು ಮೂರು ಗಂಟೆಗಳ ಕಾಲ ಅವರನ್ನು ಉಳಿಸಲು ಸಕಲ ಪ್ರಯತ್ನ ಮಾಡಿದ್ವಿ. ಆದರೆ, ಫಲಕಾರಿಯಾಗಲಿಲ್ಲ. ದುರಾದೃಷ್ಟವಶಾತ್ ಹಾರ್ಟ್ ಅಟ್ಯಾಕ್ ಆದ ಬಳಿಕ ಹಾರ್ಟ್ ತುಂಬಾ ವೀಕ್ ಆಗಿತ್ತು. ಚಿಕಿತ್ಸೆಗೆ ಅವರು ಸ್ಪಂದಿಸಲಿಲ್ಲ. ತುಂಬಾ ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡಿದ್ದಾರೆ’’ ಎಂದು ವಿಕ್ರಂ ಆಸ್ಪತ್ರೆಯ ವೈದ್ಯರು ಹೇಳಿದ್ದರು.